	ಕುರುಕ್ಷೇತ್ರ 1	

	ಉತ್ತರ ಭಾರತದಲ್ಲಿ ಸರಸ್ವತೀ (ಇಂದಿನ ಫಗ್ಗರ್) ನದಿಯ ದಕ್ಷಿಣಕ್ಕೂ ದೃಷದ್ವತೀ (ಇಂದಿನ ಚಿತಂಗ್) ನದಿಯ ಉತ್ತರಕ್ಕೂ ಇರುವ ಪ್ರದೇಶ. ಇದರ ಪ್ರಾಚೀನತಮ ಉಲ್ಲೇಖ ವೈದಿಕಯುಗದಲ್ಲಿ ರಚಿತವಾದ ಬಾಹ್ಮಣಗಳಲ್ಲಿ ಕಂಡುಬರುತ್ತದೆ. ದೇವತೆಗಳು ಕುರುಕ್ಷೇತ್ರದಲ್ಲಿ ಸತ್ರಗಳನ್ನು (ಯಾಗ) ಮಾಡಿದ್ದರೆಂದು ಶತಪಥ ತೈತ್ತರೀಯ ಬ್ರಾಹ್ಮಣಗಳಲ್ಲೂ ಮೈತ್ರಾಯಣೀ ಸಂಹಿತೆಯಲ್ಲೂ ಹೇಳಲಾಗಿದೆ. ಬ್ರಹ್ಮಾವರ್ತ, ರಾಮಹ್ರದ, ಸಮಂತ (ಸ್ಯಮಂತ) ಪಂಚಕ, ವಿನಶನ, ಸನ್ನಿಹತಿ ಎಂಬೀ ಹೆಸರುಗಳಿಂದಲೂ ಪ್ರಸಿದ್ಧವಾಗಿದ್ದ ಕುರುಕ್ಷೇತ್ರವನ್ನು ಬ್ರಾಹ್ಮಣಗಳಲ್ಲಿ ಪುಣ್ಯಭೂಮಿಯೆಂದೂ ವಾಮನ ಪುರಾಣ ಮತ್ತು ಮಹಾಭಾರತಗಳಲ್ಲಿ ಧರ್ಮಕ್ಷೇತ್ರವೆಂದೂ ಕರೆಯಲಾಗಿದೆ. ಇದು ಅಭೀರ ದೇಶದ ಒಂದು ಭಾಗವಾಗಿತ್ತೆಂದು ವಾತ್ಸ್ಯಾಯನನ ಕಾಮಸೂತ್ರದಲ್ಲಿ ವರ್ಣಿಸಲಾಗಿದೆ. ಬೌದ್ಧ ಜಾತಕಗಳಲ್ಲಿ ಕೂಡ ಹಲವೆಡೆಗಳಲ್ಲಿ ಇದರ ಪ್ರಸ್ತಾಪವುಂಟು. 7ನೆಯ ಶತಮಾನದಲ್ಲಿ ಭಾರತದಲ್ಲಿ ಪ್ರವಾಸ ಕೈಗೊಂಡಿದ್ದ ಚೀನೀ ಯಾತ್ರಿಕ ಹ್ಯುಎನ್‍ತ್ಸಾಂಗನೂ ಕುರುಕ್ಷೇತ್ರವನ್ನು ಧರ್ಮಕ್ಷೇತ್ರವೆಂದೇ ವರ್ಣಿಸಿದ್ದಾನೆ. 

	ತೈತ್ತಿರೀಯ ಆರಣ್ಯಕದಿಂದ ತಿಳಿದು ಬರುವಂತೆ ದಕ್ಷಿಣದಲ್ಲಿ ಖಾಂಡವವನ, ಉತ್ತರದಲ್ಲಿ ತೂಘ್ರ್ನ, ಪಶ್ಚಿಮದಲ್ಲಿ ಪರೀಣ-ಇವು ಕುರುಕ್ಷೇತ್ರದ ಮೇರೆಗಳು. ದೃಷದ್ವತೀ, ಸರಸ್ವತೀ, ಅಪಯಾ ಮತ್ತು ಪಸ್ತ್ಯಾ ನದಿಗಳು ಹರಿಯುತ್ತಿದ್ದ ಆ ಪ್ರದೇಶದಲ್ಲಿ ಶರ್ಯಣಾವಂತವೆಂಬ ದೊಡ್ಡ ತಟಾಕವಿತ್ತು. ತರಂತುಕ, ಆರಂತುಕ ಮಚಕ್ರುಕ ಮತ್ತು ರಾಮಹ್ರದ-ಇವು ಕುರುಕ್ಷೇತ್ರದ ಮೇರೆಗಳೆಂದೂ ಆಪ್ರದೇಶದಲ್ಲಿ ದೃಷದ್ವತೀ, ಕೌಶಿಕೀ, ಮಧುಶ್ರವಾ, ಮಂದಾಕಿನೀ ಗಂಗಾ, ವೈತರಣೀ ಹಿರಣ್ಯವತೀ, ಆಪಗಾ, ಅಂಬುಮತೀ ಮತ್ತು ಸರಸ್ವತೀ ಎಂಬ ನದಿಗಳು ಹರಿಯುತ್ತಿದ್ದುವೆಂದೂ ಮಹಾಭಾರತ ತಿಳಿಸುತ್ತದೆ. 

	ಕಾಮ್ಯಕ, ಅದಿತಿವನ, ವ್ಯಾಸವನ, ಫಲಕೀವನ, ಸೂರ್ಯವನ, ಮಧುವನ ಮತ್ತು ಪೀತಾವನಗಳೆಂಬ ಏಳು ಪುಣ್ಯ ವನಗಳು ಕುರುಕ್ಷೇತ್ರದಲ್ಲಿದ್ದುವೆಂದು ವಾಮನ ಪುರಾಣ ಮತ್ತು ನಾರಿಧೀಯಗಳಲ್ಲಿ ಹೇಳಲಾಗಿದೆ. ಹಸ್ತಿನಾಪುರ (ಇದು ದೆಹಲಿಯಿಂದ 65 ಮೈ. ವಾಯವ್ಯಕ್ಕಿದೆ), ಇಂದ್ರಪ್ರಸ್ಥ (ದೆಹಲಿಯ ಪುರಾಣಾಬಿಲಾದ ಪರಿಸರ) ಸ್ಥಾಣೇಶ್ವರ (ಇಂದಿನ ಥಾನೇಸರ್) ಹಾಗೂ ಪೃಥೂದಕ (ಇಂದಿನ ಪೆಹೋವ)-ಇವು ಕುರುಕ್ಷೇತ್ರದ ಪ್ರಧಾನ ಪ್ರಾಚೀನ ಪಟ್ಟಣಗಳು. ಮೇಲಿನ ಮಾಹಿತಿಗಳು ಸೂಚಿಸುವಂತೆ ಇಂದಿನ ಹರಿಯಾಣ ಪ್ರದೇಶದ ಕರ್ನಾಲ್-ಅಂಬಾಲಾ ಪ್ರಾಂತ್ಯವೇ ಇತಿಹಾಸ ಪ್ರಸಿದ್ಧವಾದ ಕುರುಕ್ಷೇತ್ರವೆಂಬುದು ಹೆಚ್ಚು ಮಂದಿ ವಿದ್ವಾಂಸರ ಅಭಿಪ್ರಾಯ. 

	ಸೋಮವಂಶದ ಅರಸು ಸಂವರಣ ಮತ್ತು ಅವನ ರಾಣಿ ತಪತೀ ಇವರಿಗೆ ಹುಟ್ಟಿದ ಕುರುವೆಂಬ ರಾಜರ್ಷಿ ಆಪ್ರದೇಶದಲ್ಲಿ ಅನೇಕ ಯಾಗಗಳನ್ನು ಮಾಡಿದುದರಿಂದ ಅದು ಕುರುಕ್ಷೇತ್ರವೆಂಬ ಹೆಸರನ್ನು ಪಡೆಯಿತೆಂದು ಮಹಾಭಾರತದ ಶಲ್ಯಪರ್ವದಲ್ಲಿ ಹೇಳಲಾಗಿದೆ. ಆದರೆ ಕುರುಜನಾಂಗದವರು ಅಲ್ಲಿ ಅನೇಕ ಶತಮಾನಗಳ ಕಾಲ ನೆಲಸಿದ್ದರೆಂಬ ಕಾರಣದಿಂದ ಆ ಪ್ರದೇಶಕ್ಕೆ ಕುರುಕ್ಷೇತ್ರವೆಂಬ ಹೆಸರು ಬಂತೆನ್ನುವುದು ಸಮಂಜಸವೆನಿಸುತ್ತದೆ. 

	ಭಾರತದ ಜನಕ್ಕೆ ಕುರುಕ್ಷೇತ್ರದ ಪರಿಚಯವಾಗಿರುವುದು ಅಲ್ಲಿ ಸಂಭವಿಸಿದ 18 ದಿನಗಳ ಮಹಾಭಾರತ ಯುದ್ಧದಿಂದ. ಆ ಯುದ್ಧ ನಡೆದ ಕಾಲವನ್ನು ನಿರ್ಣಯಿಸಲು ನಿರ್ದೀಷ್ಟ ಆಧಾರಗಳಾವುವೂ ದೊರೆತಿಲ್ಲ. ಕ್ರಿ.ಪೂ. 1500 -1000ರ ಅವಧಿಯಲ್ಲಿ ಯಾವಾಗಲೋ ಸಂಭವಿಸಿರಬಹುದೆಂದು ಹೇಳಬಹುದು. ಕುರುಕ್ಷೇತ್ರ, ಹಸ್ತಿನಾಪುರ ಮೊದಲಾದ, ಮಹಾಭಾರತ ಯುಗಕ್ಕೆ ಸಂಬಂಧಿಸಿದ, ಕೆಲವು ಸ್ಥಳಗಳಲ್ಲಿ ಆಗಿಂದಾಗ್ಗೆ ನಡೆಸಲಾದ ಪ್ರಾಕ್ತನ ಉತ್ಖನನಗಳಲ್ಲಿ ದೊರೆತಿರುವ ವರ್ಣ ಚಿತ್ರಿತವಾದ ಬೂದಿ ಬಣ್ಣದ ಮಡಕೆಗಳು ಕ್ರಿ.ಪೂ. ಸುಮಾರು 1100-600ರ ಅವಧಿಯವಾಗಿವೆ. ಅವು ಮಹಾಭಾರತದ ಕಾಲದವೆಂಬುದು ಪುರಾತತ್ವ ಸಂಶೋಧಕರ ಅಭಿಪ್ರಾಯ. 

	ಮಹಾಭಾರತದ ಅನಂತರ ಕಾಲದಲ್ಲಿ ಹುಟ್ಟಿದ ಹಲವು ಸಾಹಿತ್ಯ ಕೃತಿಗಳಲ್ಲೂ ಶಾಸನಗಳಲ್ಲೂ ಕುರುಕ್ಷೇತ್ರದ ಪ್ರಸ್ತಾಪವಿದೆಯಾದರೂ ಆಗಲೂ ಅದು ತನ್ನ ಹಿಂದಿನ ಪ್ರಾದೇಶಿಕ ಸಮಗ್ರತೆಯನ್ನು, ಉಳಿಸಿಕೊಂಡಿತ್ತೆನ್ನಲಾಗುವುದಿಲ್ಲ. ಹಿಂದೂ ಧರ್ಮದ ದೃಷ್ಟಿಯಲ್ಲಿ ಇಂದಿನ ವರೆಗೂ ಭಾರತದ ಪುಣ್ಯಕ್ಷೇತ್ರಗಳಲ್ಲಿ ಕುರುಕ್ಷೇತ್ರ ಪ್ರಮುಖವಾದ್ದು. ಕರ್ಣಾಟಕದಲ್ಲಿ ದೊರೆತಿರುವ ಬೇರೆ ಬೇರೆ ಶತಮಾನಗಳಲ್ಲಿ ಬರೆಯಲಾದ, ನೂರಾರು ಕನ್ನಡ ಶಾಸನಗಳಲ್ಲಿ ಕುರುಕ್ಷೇತ್ರವನ್ನು ಅಘ್ರ್ಯಕ್ಷೇತ್ರವೆಂದು ಕರೆಯಲಾಗಿದೆ. ಅಲ್ಲಿ ಧರ್ಮಕಾರ್ಯ ಮಾಡಿದರೆ ಅಶ್ವಮೇಧ ಯಾಗ ಮಾಡಿದಷ್ಟೇ ಫಲ ದೊರೆಯುವುದೆಂದೂ, ಅಲ್ಲಿ ಪಾಪಕಾರ್ಯಗಳಿಗೆ ಪಂಚಮಹಾ ಪಾತಕಗಳಷ್ಟು ಭೀಕರ ಫಲ ದೊರಕುವುದೆಂದೂ ಹೇಳಲಾಗಿದೆ.     		 		
	(ಕೆ.ವಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ